ದಿವಾಕರ, ರಂಗನಾಥ ರಾಮಚಂದ್ರ
ರಾಜಕಾರಣಿ; ಪತ್ರಿಕೋದ್ಯಮಿ; ಧರ್ಮ ಮತ್ತು ತತ್ತ್ವe್ಞÁನ ವೇತ್ತ; ಕನ್ನಡ, ಹಿಂದೀ, ಇಂಗ್ಲಿಷ್‍ಗಳಲ್ಲಿ ಗ್ರಂಥಕರ್ತ. ಜನ್ಮ ಸೆಪ್ಟೆಂಬರ್ 30, 1984. ಸ್ವಾತಂತ್ರ್ಯಹೋರಾಟ ಮತ್ತು ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಡಿಗರಲ್ಲಿ ರಂಗನಾಥ ದಿವಾಕರರ ಜೀವನ ಬಹಳ ವೈವಿಧ್ಯಪೂರ್ಣವಾದ್ದು. ಇವರ ತಂದೆ ರಾಮಚಂದ್ರ ದಿವಾಕರರು ಹುಬ್ಬಳ್ಳಿಯಲ್ಲಿ ರೈಲ್ವೆ ಇಲಾಖೆಯಲ್ಲಿದ್ದರು. ರಂಗನಾಥ ದಿವಾಕರರ ಶಿಕ್ಷಣ ಹುಬ್ಬಳ್ಳಿ, ಬೆಳಗಾಂವಿ, ಪುಣೆ, ಮುಂಬಯಿಗಳಲ್ಲಿ ಆಯಿತು. ಎಂ.ಎ. ಎಲ್‍ಎಲ್.ಬಿ. ಪದವಿಗಳನ್ನು ಪಡೆದು ಸ್ವಲ್ಪ ಕಾಲ ಕೊಲ್ಹಾಪುರದ ರಾಜಾರಾಮ ಕಾಲೇಜು ಮತ್ತು ಧಾರವಾಡದ ಕಟ್ಟಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು. ವಿದ್ಯಾರ್ಥಿದೆಶೆಯಲ್ಲಿಯೇ ದೇಶಸೇವೆಯ ಸಂಕಲ್ಪ ಮಾಡಿ 1921 ರಿಂದ ಮಹಾತ್ಮಾ ಗಾಂಧಿಯವರು ಪ್ರಾರಂಭಿಸಿದ ಎಲ್ಲ ಆಂದೋಲನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರಮುಖ ನೇತಾರರಲ್ಲೊಬ್ಬರಾಗಿ ಪ್ರತಿಸಲವೂ ಕಾರಾಗೃಹವಾಸವನ್ನು ಅನುಭವಿಸಿದರು. ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯೂ ಆಮೇಲೆ ಅದರ ಅಧ್ಯಕ್ಷರೂ ಆಗಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬರುವ ಸಂಧಿಕಾಲದಲ್ಲಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರು. ಸ್ವತಂತ್ರ ಭಾರತದ ಕೇಂದ್ರ ಸರ್ಕಾರದಲ್ಲಿ ಸಮಾಚಾರ ಮತ್ತು ಆಕಾಶವಾಣಿ ಮಂತ್ರಿಯಾಗಿಯೂ (9148-52) ಆಮೇಲೆ ಬಿಹಾರದ ರಾಜ್ಯಪಾಲರಾಗಿಯೂ (1952-57) ಇದ್ದು 1957ರಲ್ಲಿ ನಿವೃತ್ತರಾದರು. ಆಮೇಲೆ ಗಾಂಧೀ ಸ್ಮಾರಕ ನಿಧಿಯ ಮತ್ತು ಗಾಂಧೀ ಶಾಂತಿಪ್ರತಿಷ್ಠಾನದ ಅಧ್ಯಕ್ಷರಾಗಿದ್ದರು. ವಿಶ್ವಶಾಂತಿ ಚಳುವಳಿಯಲ್ಲಿ ಚಕ್ರವರ್ತಿ ರಾಜಗೋಪಾಲಾಚಾರಿಯವರೊಡನೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷ ಜಾನ್ ಕೆನೆಡಿಯವರನ್ನು ಕಂಡಿದ್ದರು. ಇವರು ಹಲವು ಸಲ ವಿದೇಶಯಾತ್ರೆ ಮಾಡಿದ್ದಾರೆ.

ಕರ್ನಾಟಕ ಏಕೀಕರಣಕ್ಕಾಗಿ ದಿವಾಕರರು ವಿಶೇಷವಾಗಿ ಶ್ರಮಿಸಿದರು. 1928ರಲ್ಲಿ ಮೋತಿಲಾಲ್ ನೆಹರೂ ಸಂವಿಧಾನ ಸಮಿತಿಯ ಮುಂದೆ ಕನ್ನಡಿಗರ ಪರವಾಗಿ ಹಾಜರಾಗಿ ಕನ್ನಡ ಮಾತಾಡುವ ಪ್ರದೇಶಗಳನ್ನು ಒಂದು ಆಡಳಿತದ ಅಡಿಯಲ್ಲಿ ಸೇರುವುದು ಅಗತ್ಯ ಮತ್ತು ಸಾಧ್ಯ ಎಂದು ಪರಿಣಾಮಕಾರಿಯಾಗಿ ಪ್ರತಿಪಾದಿಸಿದರು. ಅದರಿಂದ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಪ್ರದೇಶಗಳನ್ನು ಕಾಂಗ್ರೆಸ್ ಸಂಘಟನೆಯ ಮಟ್ಟಿಗೆ ಒಂದುಗೂಡಿಸಿ ಕರ್ನಾಟಕ ಕಾಂಗ್ರೆಸ್ ಸಮಿತಿ ನಿರ್ಮಾಣ ಮಾಡಲಾಯಿತು. ಸ್ವಾತಂತ್ರ್ಯ ಬಂದ ಅನಂತರ 1956ರಲ್ಲಿ ಕರ್ನಾಟಕ ರಾಜ್ಯ ಅಸ್ತಿತ್ವದಲ್ಲಿ ಬರುವವರೆಗೂ ಅನೇಕ ಆಯೋಗಗಳ ಮುಂದೆ ಪ್ರತಿಪಾದಿಸುವ ಮೂಲಕವೂ ತಮ್ಮ ವಶದಲ್ಲಿದ್ದ ಪತ್ರಿಕೆಗಳ ಮೂಲಕವೂ ಕರ್ನಾಟಕ ಏಕೀಕರಣಕ್ಕಾಗಿ ಪ್ರಚಾರ ಮಾಡಿದರು. 

ರಾಜಕೀಯ ಉದ್ದೇಶಕ್ಕಾಗಿ ಪತ್ರಿಕಾಲೇಖನಗಳನ್ನು ಬರೆಯತೊಡಗಿದ ದಿವಾಕರರು 1921ರಲ್ಲಿ ಸಹಕಾರಿಗಳೊಡನೆ ಕರ್ಮವೀರ ವಾರಪತ್ರಿಕೆ ಸ್ಥಾಪಿಸಿ ನೇರವಾಗಿ ಕನ್ನಡ ಪತ್ರಿಕೋದ್ಯಮವನ್ನು ಪ್ರವೇಶಿಸಿದರು. ಬ್ರಿಟಿಷ್ ಸರ್ಕಾರದ ಆಗ್ರಹಕ್ಕೊಳಗಾಗಿ ಕರ್ಮವೀರ ಹಲವು ಸಲ ನಿಂತು ನಿಂತು ಪುನರುಜ್ಜೀವನ ಹೊಂದಿ 1940ರಿಂದ ನಿರಂತರವಾಗಿ ನಡೆಯುತ್ತಿದೆ. 1935ರಲ್ಲಿ ಪ್ರಧಾನವಾಗಿ ಪತ್ರಿಕೆಗಳು ನಡೆಸುವುದಕ್ಕಾಗಿ ಇವರು ಸ್ಥಾಪಿಸಿದ ರಾಷ್ಟ್ರೀಯ ವಾಙ್ಮಯ ಪ್ರಕಾಶನ (ಅನಂತರ ಲೋಕಶಿಕ್ಷಣ) ಟ್ರಸ್ಟು ಮೊದಲೇ ಬೆಳಗಾಂವಿಯಲ್ಲಿ ಪ್ರಾರಂಭಿಸಲಾಗಿದ್ದ ಸಂಯುಕ್ತ ಕರ್ನಾಟಕ ದೈನಿಕ ಪತ್ರಿಕೆಯನ್ನು ವಹಿಸಿಕೊಂಡು ಹುಬ್ಬಳ್ಳಿಯಿಂದ ಅದನ್ನು ಪ್ರಕಟಿಸಲಾರಂಭಿಸಿತು. 1958 ರಿಂದ ಬೆಂಗಳೂರಿನಿಂದ ಅದರ ಇನ್ನೊಂದು ಆವೃತ್ತಿ ಹೊರಡುತ್ತಿದೆ. ಕರ್ಮವೀರ ಪತ್ರಿಕೆಯನ್ನು ಟ್ರಸ್ಟು ವಹಿಸಿಕೊಂಡಿತು. 1956ರಲ್ಲಿ ಅದು ಕಸ್ತೂರಿ ಮಾಸಿಕ ಡೈಜೆಸ್ಟನ್ನು ಪ್ರಾರಂಭಿಸಿತು. 1957 ರಿಂದ ದಿವಾಕರರೇ ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳ ಮತ್ತು 1964 ರಿಂದ ಕರ್ಮವೀರ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಈಗ ಅದನ್ನು ಬೇರೆ ಸಂಸ್ಥೆ ವಹಿಸಿಕೊಂಡಿದ್ದರೂ ಇವರೆ ಅವುಗಳ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ. ಇವೆಲ್ಲ ಪತ್ರಿಕೆಗಳು ಕರ್ನಾಟಕದಲ್ಲಿ ಪ್ರಮುಖ ಸ್ಥಾನ ಪಡೆದಿವೆ. 1921ರಲ್ಲಿ ಸ್ವಲ್ಪಕಾಲ ದಿವಾಕರರು ಒಂದು ಇಂಗ್ಲಿಷ್ ವಾರಪತ್ರಿಕೆಯನ್ನೂ ನಡೆಸುತ್ತಿದ್ದರು. ಇವರು ಬಹುಕಾಲ ಅಖಿಲ ಭಾರತ ಪತ್ರಿಕಾಸಂಸ್ಥೆಗಳ ಕಾರ್ಯಕಾರಿ ಸದಸ್ಯರಾಗಿದ್ದರು. ಇವರು ನಡೆಸುತ್ತಿದ್ದ ಪತ್ರಿಕೆಗಳು ವಿವೇಕಯುಕ್ತವಾದ ನಿಲುಮೆಗಳನ್ನು ಅತಿರೇಕವಿಲ್ಲದ ಮಾತುಗಳಲ್ಲಿ ವಿವರಿಸುವ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ವಸ್ತುನಿಷ್ಠ ತಳಹದಿ ಹಾಕಲು ನೆರವಾದವು.

ರಂಗನಾಥ ದಿವಾಕರರು ಕನ್ನಡದಲ್ಲಿ ವಿಸ್ತಾರವಾಗಿ ಮತ್ತು ಇಂಗ್ಲಿಷ್ ಹಿಂದಿಗಳಲ್ಲಿ ಸ್ವಲ್ಪ ಮಟ್ಟಿಗೆ ಗ್ರಂಥರಚನೆ ಮಾಡಿದ್ದಾರೆ. ಸೆರೆಮನೆಯಲ್ಲಿದ್ದಾಗ ಇವರು ಪೌರಸ್ತ್ಯ-ಪಾಶ್ಚಾತ್ಯ ತತ್ತ್ವe್ಞÁನ ಹಾಗೂ ಆಧ್ಯಾತ್ಮಿಕ, ಅನುಭಾವ, ಆಗಮ, ತಾಂತ್ರಿಕ ಪರಂಪರೆಗಳನ್ನು ಅಭ್ಯಸಿಸಿ ಭಗವದ್ಗೀತೆ, ಉಪನಿಷತ್ತುಗಳನ್ನು ಕುರಿತು ಅನೇಕ ಅನುವಾದ ಮತ್ತು ಸ್ವತಂತ್ರ್ಯ ಕೃತಿಗಳನ್ನು ರಚಿಸಿದರು. ಕನ್ನಡದ ಶಿವಶರಣರ ವಚನಗಳನ್ನು ಕುರಿತು ಇವರು ರಚಿಸಿದ ವಚನಶಾಸ್ತ್ರರಹಸ್ಯ ಎಂಬ ಬೃಹತ್ ಕೃತಿ ಆ ವಿಷಯದಲ್ಲಿ ರಚಿತವಾದ ಬಹುಶಃ ಪ್ರಥಮ ತೌಲನಿಕ ವಸ್ತು ವಸ್ತುನಿಷ್ಠ ಗ್ರಂಥವಾಗಿದೆ. ಹರಿದಾಸರ ಕೃತಿಗಳ ಅಧ್ಯಯನದಿಂದ ಬಂದ ಹರಿಭಕ್ತಿಸುಧೆಯ ವ್ಯಾಪ್ತಿ ಸ್ವಲ್ಪ ಸಣ್ಣದು. ಶ್ರೀರಾಮಕೃಷ್ಣ ಪರಮಹಂಸರ ಬಗ್ಗೆ ಕನ್ನಡದಲ್ಲಿ, ಶ್ರೀ ಅರವಿಂದರ ತತ್ತ್ವಜ್ಞಾನ ಮತ್ತು ಚರಿತ್ರೆಯ ಬಗ್ಗೆ ಇಂಗ್ಲಿಷ್ ಕನ್ನಡಗಳಲ್ಲಿ ಇವರು ಗ್ರಂಥರಚನೆ ಮಾಡಿದ್ದಾರೆ. ಗಾಂಧೀ ತತ್ತ್ವಗಳ ಬಗ್ಗೆಯೂ ಅವರು ಬರೆದಿದ್ದಾರೆ. ಅನೇಕ ಇಂಗ್ಲಿಷ್ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಸೆರೆಯ ಮರೆಯಲ್ಲಿ ಎಂಬುದು ಸೆರೆಮನೆಯ ಅನುಭವಗಳನ್ನು ಕುರಿತ ಕನ್ನಡ ಗ್ರಂಥ. 

ದಿವಾಕರರ ತತ್ತ್ವಚಿಂತನೆ ಹೆನ್ರಿ ಬರ್ಗ್‍ಸನನ ಪ್ರಾಣತತ್ತ್ವವಾದ, ಐನ್‍ಸ್ಟೀನರ್ ಸಾಪೇಕ್ಷತಾವಾದ ಇವುಗಳಿಂದ ಸಾಕಷ್ಟು ಪ್ರಭಾವಿತವಾಗಿದೆ. ಇವರ ಜೀವನದರ್ಶನ ಮುಖ್ಯವಾಗಿ ಅಂತರಾತ್ಮನಿಗೆ ಎಂಬ ಗ್ರಂಥಗಳಲ್ಲೂ ಅನೇಕ ವರ್ಷಗಳ ಅನಂತರ ಮಾಗಿದ ವಯಸ್ಸಿನಲ್ಲಿ ಬಂದ ವಿಶ್ವಾತ್ಮನಿಗೆ ಎಂಬ ಗ್ರಂಥದಲ್ಲೂ ವ್ಯಕ್ತವಾಗಿದೆ. ಇವೆರಡೂ ಚಿಕ್ಕ ವಚನರೂಪಿ ಸ್ವತಂತ್ರ ಕೃತಿಗಳು. ಅಂತರಾತ್ಮನಿಗೆ ಕೃತಿಯಲ್ಲಿ ಪ್ರಧಾನವಾಗಿ ಇಂದ್ರಿಯಾತೀತ ಆಧ್ಯಾತ್ಮಿಕ ಅನುಭೂತಿಯ ಕಡೆ ಒಲವು ಇದ್ದರೆ, ವಿಶ್ವಾತ್ಮನಿಗೆ ಕೃತಿಯಲ್ಲಿ ದರ್ಶನ ವಿಕಾಸಹೊಂದಿ, ಸಾಂದ್ರವಾದ ಇಂದ್ರಿಯಾನುಭೂತಿಗಳನ್ನು ಹೊರಗಿಡದೆ, ಅವನ್ನೂ ಮನುಷ್ಯನ ಸಮಗ್ರ ಇರುವಿಕೆ ಆಗುವಿಕೆಗಳ ಊಧ್ರ್ವಮುಖವಿಕಾಸದ ಉಪಕರಣಗಳಾಗಿ ಭಾವಿಸಿ. ಭೌತಿಕ-ಆಧ್ಯಾತ್ಮಿಕಗಳ ಅವಿಭಾಜ್ಯತೆಯನ್ನು ಪ್ರತಿಪಾದಿಸಿದೆ.

ದಿವಾಕರರ ಸಾಹಿತ್ಯ ಕಾರ್ಯವನ್ನು ಮೆಚ್ಚಿ ನಾಡು 1938ರಲ್ಲಿ ಇವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆರಿಸಿತು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಪದವಿ ಕೊಟ್ಟಿದೆ.

ದಿವಾಕರರ ಪ್ರಮುಖ ಗ್ರಂಥಗಳು ಇವು: ಕನ್ನಡ: ಉಪನಿಷತ್ ಪ್ರಕಾಶ, ಉಪನಿಷತ್ ಕಥಾವಲಿ, ಛಾಂದೋಗ್ಯೋಪನಿಷತ್, ಗೀತೆಯ ಗುಟ್ಟು, ಕರ್ಮಯೋಗ್, ವಚನಶಾಸ್ತ್ರರಹಸ್ಯ, ಹರಿಭಕ್ತಿಸುಧೆ, ರಾಮಕøಷ್ಣ ಚರಿತಾಮೃತ, ಮಹಾಯೋಗಿ ಅರವಿಂದರು, ಮಹಾತ್ಮರ ಮನೋರಂಗ, ಸತ್ಯಾಗ್ರಹ, ಅಂತರಾತ್ಮನಿಗೆ, ವಿಶ್ವಾತ್ಮನಿಗೆ, ಸೆರೆಯ ಮರೆಯಲ್ಲಿ; ಹಿಂದಿ; ನಾಗರಿಕ (ಎಂ. ಆರ್. ಶ್ರೀ. ಯವರ ಕನ್ನಡ ನಾಟಕದ ಅನುವಾದ). ಇಂಗ್ಲಿಷ್; ಸತ್ಯಾಗ್ರಹ, ಮಹಾಯೋಗಿ, ಪರಮಹಂಸ ರಾಮಕೃಷ್ಣ, ಭಗವಾನ್ ಬುದ್ಧ; ಗ್ಲಿಂಪ್ಸಸ್ ಆಫ್ ಗಾಂಧೀಜೀ ಉಪನಿಷದ್ಸ್ ಇನ್ ಸ್ಟೋರಿ ಅಂಡ್ ಡಯಲಾಗ್; ಸಂಪಾದಿತ: ಬಿಹಾರ್ ತ್ರೂ ದಿ ಏಜಸ್, ಕರ್ನಾಟಕ ತ್ರೂ ದಿ ಏಜಸ್ ಮುಂತಾದವು.
(ಪಿ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ